ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ರಾಗ ನಾದನಾಮಕ್ರಿಯೆ        ತಾಳ: ಛಾಪು
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು || ಪ ||  ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ --

ಅನ್ನದಾನವ ಮಾಡುವರಾಗಿ
ಅನ್ನ ಛತ್ರವನ್ನಿಟ್ಟವರಾಗಿ
ಅನ್ಯ ವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ || ೧ ||  ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ --

ಮಾತಾಪಿತೃಗಳ ಸೇವಿಪರಾಗಿ
ಪಾಪ ಕಾರ್ಯದ ಬಿಟ್ಟವರಾಗಿ
ಜಾತಿಯಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ || ೨ ||  ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ --

ಗುರು ಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ
ಪರಮ ಪುಣ್ಯವ ಮಾಡುವರಾಗಿ  || ೩ ||  ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ --

ಶ್ರೀನಿವಾಸನ ಸ್ಮರಿಸುವರಾಗಿ
ಪ್ರಾಣರಾಯನ ದಾಸರಾಗಿ
ದಾನಕೆಂದು ಬಲು ಹೆದರಿ ಇಂಥ
ದೀನವೃತ್ತಿಯಲಿ ಹೀನರಾಗಿ   || ೪ ||  ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ --

ಪಕ್ಷಮಾಸ ವ್ರತ ಮಾಡುವರಾಗಿ
ಪಕ್ಷಿವಾಹನಗೆ ಪ್ರಿಯರಾಗಿ
ಕುಕ್ಷಿಲಿ ಕಲ್ಮಷ ಇಲ್ಲದವರಾಗಿ
ಭಿಕ್ಷುಕರು ಅತಿ ತುಚ್ಛರಾಗಿ  || ೫ ||  ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ --

ವೇದ ಪುರಾಣದ ತಿಳಿದವರಾಗಿ
ಮೇದಿನಿಯಾಳುವಂಥವರಾಗಿ
ಸಾಧು ಧರ್ಮವಾಚರಿಸುವರಾಗಿ
ಓದಿ ಗ್ರಂಥಗಳ ಪಂಡಿತರಾಗಿ   || ೬ ||  ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ --

ಆರು ಮಾರ್ಗವ ಅರಿತವರಾಗಿ
ಮೂರು ಮಾರ್ಗವ ತಿಳಿದವರಾಗಿ
ಭೂರಿ ತತ್ತ್ವವ ಬೆರೆದವರಾಗಿ
ಕ್ರೂರರ ಸಂಗವ ಬಿಟ್ಟವರಾಗಿ  || ೭ ||  ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ --

ಕಾಮ ಕ್ರೋಧವ ಅಳಿದವರಾಗಿ
ನೇಮ ನಿಷ್ಠೆಗಳ ಮಾಡುವರಾಗಿ
ಆ ಮಹಾಪದವಿಲಿ ಸುಖಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ  || ೮ ||

ಸಿರಿ ರಮಣನ ಸದಾ ಸ್ಮರಿಸುವರಾಗಿ
ಗುರುತಿಗೆ ಬಾಹೋರಂಥವರಾಗಿ
ಕರೆಕರೆ ಸಂಸಾರ ನೀಗುವರಾಗಿ
ಪುರಂದರವಿಠಲನ ಸೇವಿಪರಾಗಿ  || ೯ ||   ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ -- ದಾಸ ವಾಣಿ
ರಚನೆ: ಪುರಂದರ ದಾಸರು

ನೋಡಿ
ಪುರಂದರದಾಸರ ಸಾಹಿತ್ಯ
ಪರಿವಿಡಿ

ಉಲ್ಲೇಖ
ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ